ನಟ್ಟ, ಜೂಲ್ಯೊ -
1903. ಇಟಲಿಯ ರಸಾಯನ ವಿಜ್ಞಾನಿ. ಒಲಿಫಿನ್ ಪಾಲಿಮರುಗಳ ಬಗ್ಗೆ ಮಾಡಿದ ಮೂಲಭೂತ ಸಂಶೋಧನೆಗಾಗಿ ಇವರಿಗೆ 1963ರಲ್ಲಿ ನೊಬೆಲ್ ಪಾರಿತೋಷಿಕವನ್ನು ಕೆ. ಜಿಗ್ಲರ್ ಎಂಬುವರೊಂದಿಗೆ ಕೊಡಲಾಯಿತು. 1903 ಫೆಬ್ರುವರಿ 26ರಂದು ಗಿನೊ ಬಳಿಯ ಇಂಪಿರಿಯದಲ್ಲಿ ಹುಟ್ಟಿದ ನಟ್ಟ ಮಿಲನ್ ಪಾಲಿಟೆಕ್ನಿಕ್ಕಿನಿಂದ ಡಾಕ್ಟೊರೇಟ್ ಪದವಿ ಪಡೆದು (1924) ಪಾವಿಯ, ರೋಮ್ ಹಾಗೂ ಟ್ಯೂರಿನ್ ವಿಶ್ವವಿದ್ಯಾಲಯಗಳಲ್ಲಿ ರಸಾಯನವಿಜ್ಞಾನದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ತೀವ್ರ ಒತ್ತಡದಲ್ಲಿ ನಡೆಯುವ ಆಗ್ರ್ಯಾನಿಕ್ ಕ್ರಿಯೆಗಳು, ಅವುಗಳ ಉಷ್ಣಗತಿ ವೃತ್ತಾಂತ (ಥರ್ಮೊಡೈನಮಿಕ್ಸ್) ಮತ್ತು ಬಲಗತಿವೃತ್ತಾಂತ (ಕೈನೆಟಿಕ್ಸ್) ಇವುಗಳ ಬಗ್ಗೆ ನಟ್ಟರಿಗೆ ವಿಶೇಷಾಸಕ್ತಿ. ವಿವಿಧ ವೇಗವರ್ಧಕಗಳ ರಚನೆಯ ಬಗ್ಗೆಯೂ ಹಾಗೆ. ಮೆಥನಾಲನ್ನು ಆಧುನಿಕ ವಿಧಾನದಲ್ಲಿ ಕೈಗಾರಿಕಾ ಮಟ್ಟದಲ್ಲಿ ಸಂಶ್ಲೇಷಿಸುವಲ್ಲಿ, ಮೆಥನಾಲಿನಿಂದ ಫಾರ್ಮಾಲ್ಡಿಹೈಡನ್ನೂ ಪ್ರೊಪಿಲೀನ್ ಮತ್ತು ಕಾರ್ಬನ್ ಮಾನಾಕ್ಸೈಡಿನಿಂದ ಬ್ಯೂಟರಾಲ್ಡಿಹೈಡನ್ನೂ ಅಸಿಟಲೀನ್ ಮತ್ತು ಕಾರ್ಬನ್ ಮಾನಾಕ್ಸೈಡಿನಿಂದ ಸಕ್ಸೀನಿಕ್ ಆಮ್ಲವನ್ನೂ ತಯಾರಿಸುವಲ್ಲಿ ನಟ್ಟರ ಸಂಶೋಧನೆಯೇ ಮೂಲಾಧಾರ. ಬೃಹದಣುರಸಾಯನವಿಜ್ಞಾನದ ಮೇಲೆ ಆಳವಾದ ಅಧ್ಯಯನವನ್ನು 1953ರಲ್ಲಿ ಪ್ರಾರಂಭಿಸಿದ ಬಳಿಕ ಅವರ ಹೊಸ ಸಂಶೋಧನೆಗಳನ್ನು ಕುರಿತು ಹೆಚ್ಚಿನ ವಿವರ ತಿಳಿಯಲು ಪ್ರಾರಂಭವಾಯಿತು. ಹೆಚ್ಚಿನ ಅಣುತೂಕವುಳ್ಳ ಪಾಲಿ ಎಥಿಲೀನಿನ ಸಂಶ್ಲೇಷಣೆ ಜಿಗ್ಲರ್ ಅವರಿಗೂ ಇಟಲಿಯ ಮೊಂಟಿಕಾಟಿನಿ ಕಂಪೆನಿಗೂ ಆದ ಒಡಂಬಡಿಕೆಯ ಕಾರಣವಾಗಿ ಸಾಧ್ಯವಾಯಿತು. 1954ರ ಪೂರ್ವಾರ್ಧದಲ್ಲಿ ಜಿಗ್ಲರ್ ವೇಗವರ್ಧಕವನ್ನು ಪ್ರೊಪಿಲೀನ್ ಪಾಲಿಮರೀಕರಣಕ್ಕೆ ಅಳವಡಿಸಿಕೊಂಡು ಆ ಪಾಲಿಮರಿನಲ್ಲಿ ಹೇರಳ ಸ್ಫಟಿಕಾಕೃತಿ ಇರುವುದನ್ನು ಶೋಧಿಸಿದರು. ಎಕ್ಸ್ ಕಿರಣಗಳ ವಿಧಾನದಿಂದ ಆ ಸ್ಫಟಿಕಾಕೃತಿಯ ಅಧ್ಯಯನ ಮಾಡಿ ಅದು ಸಮಾಂಗೀಯವಾಗಿರುವುದನ್ನು ತೋರಿಸಿ ಅದಕ್ಕೆ ಐಸೊಟ್ಯಾಕ್ಟಿಕ್ ಎಂಬುದಾಗಿ ಹೆಸರಿಸಿದರು. ಪ್ರೊಪಿಲೀನ್ ಮತ್ತು ಒಲಿಫಿನ್ನುಗಳ ಐಸೊಟ್ಯಾಕ್ಷಿನಲ್ ಪಾಲಿಮರೀಕರಣದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಜಿಗ್ಲರ್ ವಿವಿಧ ವೇಗವರ್ಧಕಗಳನ್ನು ಶೋಧಿಸಿದರು. ಈ ತಯಾರಿಕೆಯಲ್ಲಿ ವೇಗವರ್ಧಕದ ಮೇಲ್ಮೈ ಕೂಡ ಹೆಚ್ಚಾಗಿ ಒಂದೇ ತೆರನಾಗಿರಬೇಕಾದ ಅವಶ್ಯಕತೆಯನ್ನು ಪತ್ತೆಹಚ್ಚಿದರು. ಪಾಲಿಪ್ರೊಪಿಲೀನ್ ಪಾಲಿಮರುಗಳು ವೈವಿಧ್ಯಮಯ ಹಾಗೂ ಅನಿರೀಕ್ಷಿತ ಗುಣಗಳನ್ನು ತೋರಿಸಿದವು. ಇವು ವಾಣಿಜ್ಯ ದೃಷ್ಟಿಯಿಂದ ಪ್ರಮುಖವಾದ ಹೆಚ್ಚಿನ ದ್ರವನ ಬಿಂದು, ಹೆಚ್ಚಿನ ಸಾಮಥ್ರ್ಯ, ಫಿಲ್ಮ್ ಮತ್ತು ದಾರಗಳಾಗುವ ಗುಣಗಳನ್ನು ಪಡೆದಿದೆ. ಈ ಸಂಶ್ಲೇಷಣೆಯಲ್ಲಿ ಕೋಆರ್ಡಿನೇಷನ್ ಪಾಲಿಮರೀಕರಣ ಕಾರಣವೆಂಬುದಾಗಿ ಗುರುತಿಸಲಾಯಿತು.

1945ರಿಂದ ಈಚೆಗೆ ನಟ್ಟ ರಾಸಾಯನಿಕ ಕ್ರಿಯೆಗಳ ಕ್ರಿಯಾವಿನ್ಯಾಸ, ನವೀನ ವೇಗವರ್ಧಕಗಳು ಮತ್ತು ಪಾಲಿಮರುಗಳ ಸಂಶ್ಲೇಷಣೆಯಲ್ಲಿ ಕಾರ್ಯನಿರತರಾಗಿರುವರು. ಸಿಸ್-1.4-ಪಾಲಿಬ್ಯೂಟಡೈಯೀನ್ ಮತ್ತು ಎಥಿಲೀನ್ ಹಾಗೂ ಪ್ರೊಪಿಲೀನ್ ಸಹಪಾಲಿಮರುಗಳಂಥ ಕೃತಕ ರಬ್ಬರುಗಳ ತಯಾರಿಕೆಯಲ್ಲಿ ಮಗ್ನರಾಗಿದ್ದಾರೆ. ಇಟಲಿಯ ಮೊಂಟಿಕಾಟಿನಿ ಕಂಪನಿಯ ಸಲಹೆಗಾರರೂ ಆಗಿರುವರು.				
					(ಪಿ.ಜಿ.ಆರ್.)